ಪ್ರಧಾನ ಮಂತ್ರಿ - 
	ಸಂಸದೀಯ ವ್ಯವಸ್ಥೆಯುಳ್ಳ ದೇಶಗಳಲ್ಲಿಯ ಸರ್ಕಾರದ ಕಾರ್ಯಾಂಗದ ಮುಖ್ಯ (ಪ್ರೈಮ್ ಮಿನಿಸ್ಟರ್). ಅವನು ರಾಷ್ಟ್ರಪತಿಯ ಅಡಿಯಲ್ಲಿ ಆಡಳಿತ ನಡೆಸುತ್ತಾನೆ. ಆದರೆ ಕೆಲವು ಕಡೆಗಳಲ್ಲಿ ರಾಷ್ಟ್ರಪತಿಯೇ ಪ್ರಧಾನಮಂತ್ರಿಯ ಕಾರ್ಯಭಾರಗಳನ್ನೂ ವಹಿಸಿಕೊಳ್ಳುವುದುಂಟು. ಸಂಸದೀಯ ಆಡಳಿತವಿಲ್ಲದ ನಿರಂಕುಶಾಧಿಕಾರವಿದ್ದ ಕಾಲದಲ್ಲೇ ಪ್ರಧಾನ ಮಂತ್ರಿಯ ಹುದ್ದೆ ಉಗಮಗೊಂಡಿದ್ದು. ಆಗ ಸರ್ಕಾರದ ಎಲ್ಲ ಮಂತ್ರಿಗಳೂ ದೊರೆಯ ಅಧೀನದಲ್ಲಿ ಅಧಿಕಾರ ನಡೆಸುತ್ತಿದ್ದರು. ಅವರಲ್ಲಿ ಒಬ್ಬೊಬ್ಬರೂ ತಂತಮ್ಮ ಇಲಾಖೆಗಳ ನಿರ್ವಹಣೆಯ ವಿಚಾರದಲ್ಲಿ ವೈಯಕ್ತಿಕವಾಗಿ ದೊರೆಗೆ ಜವಾಬ್ದಾರರಾಗಿದ್ದರು. ಅವರಲ್ಲಿ ಯಾರಾದರೊಬ್ಬ ಹೆಚ್ಚು ಪ್ರಭಾವಶಾಲಿಯಾಗಿ ಹೆಚ್ಚಿನ ಅಧಿಕಾರ ಚಲಾಯಿಸುತ್ತಿದ್ದಿರಬಹುದು. ಆದರೆ ಅವನಿಗೆ ಯಾವುದೇ ಸಂವಿಧಾನ ಆ ಅಧಿಕಾರವನ್ನು ನೀಡಿರುತ್ತಿರಲಿಲ್ಲ. ಇಂದಿನ ಅರ್ಥದಲ್ಲಿ ಪ್ರಧಾನಮಂತ್ರಿಯ ಪರಿಕಲ್ಪನೆ ವಿಕಾಸಗೊಂಡಿರುವುದು ಎರಡು ಶತಮಾನಗಳಿಂದ ಈಚೆಗೆ.

	ಭಾರತದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಸಂಸದೀಯ ವ್ಯವಸ್ಥೆ ಜಾರಿಯಲ್ಲಿದೆ. ಲೋಕ ಸಭೆಯಲ್ಲಿ ಬಹುಮತ ಪಡೆದ ಪಕ್ಷದ ಸದಸ್ಯರು ತಮ್ಮ ನಾಯಕನನ್ನು ಚುನಾಯಿಸುತ್ತಾರೆ. ಇವರನ್ನು ರಾಷ್ಟ್ರಪತಿ ಪ್ರಧಾನಮಂತ್ರಿಯಾಗಿ ನೇಮಿಸುತ್ತಾನೆ. ಪ್ರಧಾನ ಮಂತ್ರಿಯೆಂದು ಅಧಿಕಾರ ಸ್ವೀಕರಿಸುವ ಮೊದಲು ರಾಷ್ಟ್ರಪತಿಯ ಸಮ್ಮುಖದಲ್ಲಿ ಆ ವ್ಯಕ್ತಿ ಪ್ರಮಾಣವಚನವನ್ನೂ ರಹಸ್ಯಪಾಲನೆಯ ವಚನವನ್ನೂ ಸ್ವೀಕರಿಸಬೇಕು. ಪ್ರಧಾನ ಮಂತ್ರಿ ರಾಷ್ಟ್ರಪತಿಯ ಆದೇಶದಂತೆ ಅವರಿಗೆ ತನ್ನ ಮಂತ್ರಿ ಮಂಡಲದ ಸದಸ್ಯರ ಯಾದಿಯನ್ನು ಒಪ್ಪಿಸಬೇಕು. ಭಾರತದಲ್ಲಿ ಪ್ರಧಾನ ಮಂತ್ರಿ ಲೋಕ ಸಭೆಯ ಸದಸ್ಯನಾಗಿರುತ್ತಾನಲ್ಲದೇ, ಲೋಕ ಸಭೆಯಲ್ಲಿ ತನ್ನ ಪಕ್ಷದ ನಾಯಕನೂ ಹೌದು, ಸಂಸತ್ತಿನ ಯಾವುದಾದರೊಂದು ಸದನದ ಸದಸ್ಯರಾಗಿರುವ, ತನ್ನ ಪಕ್ಷಕ್ಕೆ ಸೇರಿದ, ಯೋಗ್ಯತೆ ಅನುಭವಗಳಿಂದ ಕೂಡಿದ ಸದಸ್ಯರನ್ನು ಪ್ರಧಾನಮಂತ್ರಿ ಗುರುತಿಸಿ, ಅವರನ್ನು ಮಂತ್ರಿಮಂಡಲದಲ್ಲಿ ಸೇರಿಸಿಕೊಳ್ಳುವುದು ವಾಡಿಕೆ. ಮಂತ್ರಿಮಂಡಲವನ್ನು ರಚಿಸುವಾಗ ಪಕ್ಷದ ಧೋರಣೆಯಲ್ಲಿ ಸದಸ್ಯರಿಗೆ ಇರುವ ನಿಷ್ಠೆ, ಅವರ ಕಾರ್ಯಾನುಭವ ಮೊದಲಾದ ಗುಣಗಳನ್ನೂ ಪ್ರಧಾನ ಮಂತ್ರಿ ಗಮನಿಸುವುದು ಸಾಮಾನ್ಯ. ಪಕ್ಷದ ನೀತಿ ಧೋರಣೆಗಳಲ್ಲಿ ವಿಶ್ವಾಸವಿರುವ, ನುರಿತ, ಆಡಳಿತದ ಅನುಭವವಿರುವ, ಆದರೆ ಸಂಸತ್ತಿನ ಸದಸ್ಯರಲ್ಲದ ವ್ಯಕ್ತಿಗಳನ್ನೂ ಭಾರತದಲ್ಲಿ ಪ್ರಧಾನ ಮಂತ್ರಿ ತನ್ನ ಸಂಪುಟದಲ್ಲಿ ಸೇರಿಸಿಕೊಳ್ಳಬಹುದು. ಅಂಥವರು ಮಂತ್ರಿಯಾಗಿ ನೇಮಕವಾದ ಆರು ತಿಂಗಳೊಳಗಾಗಿ ಲೋಕಸಭೆ ಅಥವಾ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗಬೇಕು.

	ಇಂಗ್ಲೆಂಡ್, ಕೆನಡ, ನ್ಯೂಜಿûೀಲೆಂಡ್, ಆಸ್ಟ್ರೇಲಿಯ ಮೊದಲಾದ ರಾಷ್ಟ್ರಗಳಲ್ಲಿಯೂ ಸಂಸದೀಯ ಪ್ರಭುತ್ವವಿದೆ. ಅಲ್ಲೂ ಪ್ರಧಾನಮಂತ್ರಿಯಿಂದ ಕೂಡಿದ ಸಚಿವ ಸಂಪುಟ ಸರ್ಕಾರದ ಕಾರ್ಯನಿರ್ವಹಣೆ ಮಾಡುತ್ತದೆ. ಭಾರತದ ಸಂಸದೀಯ ವ್ಯವಸ್ಥೆ ಬಹಳಮಟ್ಟಿಗೆ ಬ್ರಿಟನ್ನಿನದರ ಮಾದರಿಯಲ್ಲಿ ರೂಪಿತವಾಗಿದೆ. ಮಾರ್ಲೆ ಎಂಬ ರಾಜ್ಯಶಾಸ್ತ್ರ ಪಂಡಿತ ಹೇಳುವಂತೆ, ಸಂಪುಟದಲ್ಲಿ ಎಲ್ಲ ಸದಸ್ಯರೂ ಸಮಾನ ಅಂತಸ್ತಿನವರಾದರೂ, ಭಿನ್ನಾಭಿಪ್ರಾಯ ಸಂಭವಿಸಿದ ಅಪರೂಪದ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿಗೆ ಒಂದು ಮತ ಎಂಬ ಸಮಾನ ತತ್ತ್ವದ ಮೇಲೆ ಸಂಪುಟದ ಸದಸ್ಯರ ಅಭಿಪ್ರಾಯಗಳನ್ನು ಪರಿಗಣಿಸಲಾಗುವುದಾದರೂ, ಸಂಪುಟದ ನಾಯಕ-ಎಂದರೆ ಪ್ರಧಾನ ಮಂತ್ರಿ-ಎಲ್ಲ ಸದಸ್ಯರ ಪರವಾಗಿ ಮಾತನಾಡುವ ವಿಶೇಷ ಅಧಿಕಾರ ಹೊಂದಿರುತ್ತಾನೆ. ತನ್ನ ಸಂಪುಟದ ಸದಸ್ಯನೊಬ್ಬನ ಕಾರ್ಯವಿಧಾನ ಪ್ರಧಾನಮಂತ್ರಿಗೆ ಸರಿ ಕಾಣದಿದ್ದರೆ ಅಥವಾ ಆತ ಸರ್ಕಾರದ ಅಂಗೀಕೃತ ರೀತಿ ನೀತಿ ಧೋರಣೆಗಳನ್ನು ಮೀರಿ ನಡೆದರೆ, ಆ ಸದಸ್ಯನನ್ನು ಮಂತ್ರಿಮಂಡಲದಿಂದ ವಜಾ ಮಾಡುವ ಅಥವಾ ಆತನ ರಾಜೀನಾಮೆಯನ್ನು ಕೇಳುವ ಅಧಿಕಾರ ಪ್ರಧಾನ ಮಂತ್ರಿಗೆ ಇರುತ್ತದೆ. ಸಂಪುಟದ ಸದಸ್ಯರಿಗೆ ಒಪ್ಪಿಸಿದ ಇಲಾಖೆಗಳನ್ನು ದೇಶದ ಹಿತದೃಷ್ಟಿಯಿಂದ ಅಥವಾ ಇನ್ನಾವುದೇ ಯೋಗ್ಯ ಕಾರಣದ ನಿಮಿತ್ತ ಬದಲಿಸುವ ಅಧಿಕಾರ ಪ್ರಧಾನ ಮಂತ್ರಿಗೆ ಇರುತ್ತದೆ. ತನ್ನ ಮಂತ್ರಿಮಂಡಲ ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವುದು ಪ್ರಧಾನ ಮಂತ್ರಿಯ ಪ್ರಮುಖ ಕಾರ್ಯಗಳಲ್ಲೊಂದಾಗಿರುತ್ತದೆ. ಪ್ರಧಾನ ಮಂತ್ರಿ ಹೇಗಿರಬೇಕು ಎಂಬ ವಿಚಾರವಾಗಿ ಜೆನಿಂಗ್ಸ್ ಹೇಳುವ ಮಾತು ಇದು; ಪ್ರಧಾನ ಮಂತ್ರಿಯ ವ್ಯಕ್ತಿತ್ವ, ರೀತಿ ನೀತಿ ಇವು ಜನರ ಅಭಿಪ್ರಾಯವನ್ನು ರೂಪಿಸುವುದರಲ್ಲಿ ಮಹತ್ತ್ವದ್ದಾಗಿರುತ್ತವೆ. ಪ್ರಧಾನ ಮಂತ್ರಿ ರಾಷ್ಟ್ರದ ಗೌರವ ಮತ್ತು ಘನತೆಗಳ ಪ್ರತೀಕ. ಆತ ತನ್ನ ಸದ್ವರ್ತನೆ ಸಚ್ಚಾರಿತ್ರ್ಯಗಳ ಮೂಲಕ ಜನರನ್ನು ತನ್ನೆಡೆಗೆ ಆಕರ್ಷಿಸುತ್ತಾನೆ. ಪ್ರಧಾನ ಮಂತ್ರಿ ಉತ್ತಮ ಮಾತುಗಾರನಾಗಿರಬೇಕು. ತನ್ನ ರಾಜಕೀಯ ಬಂಧುಗಳೊಡನೆ ಉತ್ತಮ ಬಾಂಧವ್ಯ ಹೊಂದಿರಬೇಕು. ಪ್ರಜೆಗಳು ತಮ್ಮ ಪ್ರಧಾನ ಮಂತ್ರಿಯ ಪ್ರತಿಯೊಂದು ಚಟುವಟಿಕೆಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ಉದಾಹರಣೆಗೆ ಇಂಗ್ಲೆಂಡಿನ ಮಾಜಿಪ್ರಧಾನಿ ಗ್ಲ್ಯಾಡ್‍ಸ್ಟನ್ ಆಕರ್ಷಕ ಕೇಶವಿನ್ಯಾಸದಿಂದ, ಬಾಲ್ಡ್‍ವಿನ್ ಹೊಗೆಸೇದುವ ಕೊಳವೆಯಿಂದ, ಚರ್ಚಿಲ್ ಸಿಗಾರ್ ಮೂಲಕ ಜನರನ್ನು ಆಕರ್ಷಿಸಿದ್ದರು.

	ಭಾರತದ ಪ್ರಧಾನಮಂತ್ರಿ ಲೋಕಸಭೆಯಲ್ಲಿ ತನ್ನ ಪಕ್ಷದ ನಾಯಕನೂ ಹೌದು. ಹೀಗಾಗಿ ಪಕ್ಷದ ಗೌರವ ಘನತೆಗಳು ಹೆಚ್ಚಾಗಬೇಕಾದರೆ ಪ್ರಧಾನಮಂತ್ರಿ ಮತ್ತು ಆತನ ಸಂಪುಟದ ಸದಸ್ಯರ ಆಳ್ವಿಕೆ ಉತ್ತಮವಾಗಿರಬೇಕಾಗುತ್ತದೆ.

	ತನ್ನ ಸರ್ಕಾರ ಪ್ರಜಾಕ್ಷೇಮಾಭಿವೃದ್ಧಿಗೆ ಕೈಗೊಂಡ ಕಾರ್ಯಗಳನ್ನು ಪ್ರಧಾನಮಂತ್ರಿ ಆಗಾಗ ರಾಷ್ಟ್ರ ಮುಖ್ಯನಿಗೆ ತಿಳಿಸುತ್ತಾನೆ. (ಬ್ರಿಟನ್ನಿನಲ್ಲಿ ರಾಣಿ ಅಥವಾ ದೊರೆ, ಭಾರತದಲ್ಲಿ ರಾಷ್ಟ್ರಪತಿ); ಆತನೊಂದಿಗೆ ತನ್ನ ದೇಶದ ಸಮಸ್ಯೆಗಳನ್ನು ಕುರಿತು ಚರ್ಚಿಸುತ್ತಾನೆ. ಭಾರತದಲ್ಲಿ ರಾಷ್ಟ್ರಪತಿಯ ವಿದೇಶ ಪ್ರವಾಸದ ಕಾರ್ಯಕ್ರಮವನ್ನು ಇಲ್ಲಿಯ ಪ್ರಧಾನಮಂತ್ರಿ ಮತ್ತು ಸಚಿವ ಸಂಪುಟದಿಂದ ರಾಣಿಯ ವಿದೇಶ ಪ್ರವಾಸದ ಕಾರ್ಯಕ್ರಮ ನಿಶ್ಚಯವಾಗುತ್ತದೆ. ಭಾರತದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಮಾಡುವ ಭಾಷಣವನ್ನು ಪ್ರಧಾನಮಂತ್ರಿ ಮತ್ತು ಆತನ ಸಂಪುಟದ ಸದಸ್ಯರು ಸಿದ್ಧಗೊಳಿಸುತ್ತಾರೆ. ರಾಯಭಾರಿಗಳು, ಭಾರತದ ಶ್ರೇಷ್ಠ ನ್ಯಾಯಾಲಯದ ನ್ಯಾಯಾಧೀಶರು. ರಾಜ್ಯದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು, ಅಟಾರ್ನಿ ಜನರಲ್, ಅಡ್ವೊಕೇಟ್ ಜನರಲ್ ಮೊದಲಾದವರನ್ನು ನೇಮಿಸುವ ಕಾರ್ಯದಲ್ಲಿ ಪ್ರಧಾನ ಮಂತ್ರಿ ಮತ್ತು ಆತನ ಸಂಪುಟದ ಸದಸ್ಯರು ರಾಷ್ಟ್ರಪತಿಗೆ ಸಲಹೆ ನೀಡುತ್ತಾರೆ. ರಾಷ್ಟ್ರದ ಸಮಸ್ಯೆಗಳ ಬಗ್ಗೆ ವಿಶೇಷ ಸಂದರ್ಭಗಳಲ್ಲಿ ಪ್ರಧಾನ ಮಂತ್ರಿ ದೇಶದ ಜನರನ್ನು ಉದ್ದೇಶಿಸಿ ಆಕಾಶವಾಣಿಯಲ್ಲಿ ಭಾಷಣ ಮಾಡುವ ಸಂಪ್ರದಾಯ ಭಾರತದಲ್ಲಿದೆ. ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಧಾನ ಮಂತ್ರಿ ತನ್ನ ದೇಶವನ್ನು ಪ್ರತಿನಿಧಿಸುತ್ತಾನೆ. ಕಾರ್ಯಬಾಹುಲ್ಯದಿಂದಾಗಿ ಆತ ಹೋಗಲಾಗದಿದ್ದರೆ ತನ್ನ ಪರವಾಗಿ ತನ್ನ ಮಂತ್ರಿ ಮಂಡಲದ ಸದಸ್ಯರನ್ನು ಕಳುಹಿಸುತ್ತಾನೆ.

	ಚರ್ಚಿನ ಆರ್ಚ್ ಬಿಷಪ್, ಇತರ ಧರ್ಮಗುರುಗಳು, ಕೆಲವು ವಿಶ್ವವಿದ್ಯಾಲಯಗಳ ಕುಲಪತಿಗಳು-ಇವರನ್ನು ನೇಮಿಸುವಾಗಲೂ ಇಂಗ್ಲೆಂಡಿನಲ್ಲಿ ಪ್ರಧಾನಮಂತ್ರಿ (ರಾಣಿ ಅಥವಾ ದೊರೆಗೆ) ಸಲಹೆ ನೀಡುತ್ತಾನೆ.

	ಒಂದು ರಾಷ್ಟ್ರದ ಮಂತ್ರಿಮಂಡಲದಲ್ಲಿ ಪ್ರಧಾನ ಮಂತ್ರಿಯ ಸ್ಥಾನ ಯಾವುದು ಎಂಬ ವಿಚಾರವಾಗಿ ಅನೇಕ ರಾಜ್ಯಶಾಸ್ತ್ರ ಪಂಡಿತರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪ್ರಪಂಚದ ರಾಷ್ಟ್ರಗಳ ಅತ್ಯುಚ್ಚ ಅಧಿಕಾರಿಗಳಲ್ಲೆಲ್ಲ ಆತ್ಯಂತ ಹೆಚ್ಚಿನ ಅಧಿಕಾರ ಹೊಂದಿರುವನು ಬ್ರಿಟಿಷ್ ಪ್ರಧಾನ ಮಂತ್ರಿ, ಎಂಬುದು ರ್ಯಾಮ್ಸೆ ಮೂರರ ಅಭಿಪ್ರಾಯ, ಅಮೆರಿಕದ ಅಧ್ಯಕ್ಷನಿಗಿಂತ ಹೆಚ್ಚು ಅಧಿಕಾರ ಬ್ರಿಟಿಷ್ ಪ್ರಧಾನಿಗೆ ಇರುತ್ತದೆ ಎಂದು ಅವರು ಹೇಳುತ್ತಾರೆ. ಬ್ರಿಟಿಷ್ ಪ್ರಧಾನಿ ಮಂದ ಪ್ರಕಾಶಗಳಿಂದ ಕೂಡಿದ ನಕ್ಷತ್ರಪುಂಜಗಳ ನಡುವಿನ ಚಂದ್ರನಂತಿದ್ದಾನೆಂಬುದು ವಿಲಿಯಮ್ ವೆರ್ನನ್ ಹಾರ್ಕೋರ್ಟ್ ಅಭಿಪ್ರಾಯ. ಬ್ರಿಟಿಷ್ ಪ್ರಧಾನಿ ಸೂರ್ಯನ ಹಾಗೆ, ಇತರ ಮಂತ್ರಿಗಳು ಅವನ ಸುತ್ತ ಪರಿಭ್ರಮಿಸುವ ಗ್ರಹಗಳಂತೆ ಎಂಬುದು ಇನ್ನೊಬ್ಬ ವಿದ್ವಾಂಸನ ಅಭಿಪ್ರಾಯ. ಭಾರತದ ಸಂವಿಧಾನದಂತೆ ಪ್ರಧಾನ ಮಂತ್ರಿಗೆ ಇತರ ಮಂತ್ರಿಗಳಿಗಿಂತ ಹೆಚ್ಚು ಅಧಿಕಾರ ಇರುತ್ತದೆ. ಸಂಪುಟದ ಸಮಾನರಲ್ಲಿ ಅವನು ಪ್ರಥಮ ಎಂದು ಹೇಳಲಾಗಿದೆ. ವಿದೇಶಾಂಗ ಧೋರಣೆ ರೂಪಿಸುವಾಗಲೂ ಪ್ರಧಾನ ಮಂತ್ರಿಯ ಪಾತ್ರ ಪ್ರಮುಖವಾದ್ದು. ಪ್ರಧಾನ ಮಂತ್ರಿಯ ಸಮ್ಮತಿ ಇಲ್ಲದೆ ಯಾವುದೇ ಪ್ರಮುಖ, ಮಹತ್ತ್ವದ ಕಾರ್ಯವಾಗದು. ಆದ್ದರಿಂದ ದೇಶದ ಆಡಳಿತಾಧಿಕಾರ ಪ್ರಧಾನ ಮಂತ್ರಿಯ ಮತ್ತು ಆತನ ಮಂತ್ರಿಮಂಡಲದ ಸದಸ್ಯರ ಕೈಯಲ್ಲಿರುತ್ತದೆ. ಪ್ರಧಾನಮಂತ್ರಿಗೆ ಮತ್ತು ಆತನ ಮಂತ್ರಿಮಂಡಲಕ್ಕೆ ಸಂಸತ್ತಿನಲ್ಲಿ ಬಹುಮತ ಪಕ್ಷದ ಬೆಂಬಲವಿಲ್ಲದಿದ್ದರೆ, ಅಥವಾ ಆತ ಸಂಸತ್ತಿನ ವಿಶ್ವಾಸ ಕಳೆದುಕೊಂಡಾಗ, ಇನ್ನಾವ ಪಕ್ಷವೂ ಸರ್ಕಾರ ರಚಿಸಲು ಅಸಮರ್ಥವೆನಿಸಿದಾಗ ಸಂಸತ್ತನ್ನು ವಿಸರ್ಜಿಸಿ ಮರು ಚುನಾವಣೆ ನಡೆಸಲು ಪ್ರಧಾನ ಮಂತ್ರಿ ರಾಷ್ಟ್ರಪತಿಗೆ ಸಲಹೆ ನೀಡಬಹುದು.
(ಎಸ್.ಎಚ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ